ಗದಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಯಲ್ಲಿ ಭಾರೀ ಉತ್ತೇಜನ ಸಿಕ್ಕಿದೆ. ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯ ಹಲವು ವರ್ಷಗಳ ಕನಸುಗಳಾದ ರೈಲ್ವೆ ಯೋಜನೆಗಳಿಗೆ ಹೊಸ ಜೀವ ಬಂದಿದೆ. ವಿಶೇಷವಾಗಿ ಗದಗ-ಮುಂಡರಗಿ-ಹರಪನಹಳ್ಳಿ ರೈಲ್ವೆ ಮಾರ್ಗದ ಸಮೀಕ್ಷೆಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಜಿಲ್ಲೆಯ ಜನರಲ್ಲಿ ಅಪಾರ ಸಂತಸ ಮೂಡಿಸಿದೆ.
ದಶಕಗಳ ಕಾಲ ಹೋರಾಟ ನಡೆಸಿದ ರೈಲ್ವೆ ಅಭಿಮಾನಿಗಳು ಮತ್ತು ಸಂಘಟನೆಗಳ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಂತಾಗಿದೆ. ಈ ಯೋಜನೆಗಳು ಜಾರಿಗೆ ಬಂದರೆ ಗದಗ ಜಿಲ್ಲೆಯ ಮೂಲೆ ಮೂಲೆಗೂ ರೈಲು ಸಂಪರ್ಕ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆ ಗದಗ ಜಿಲ್ಲೆಯ ಪ್ರಮುಖ ಮೂರು ಬೇಡಿಕೆಗಳಿಗೆ ಸ್ಪಂದಿಸಿರುವುದು ವಿಶೇಷ. ಹೊಸ ರೈಲು ಮಾರ್ಗಗಳ ಅಂತಿಮ ಸ್ಥಳ ಸಮೀಕ್ಷೆ ಮತ್ತು ಸಂಚಾರ ಸಮೀಕ್ಷೆಗಳಿಗೆ ಅನುದಾನ ನೀಡಲಾಗಿದೆ. ಇದರಿಂದ ಮುಂದಿನ ಹಂತದಲ್ಲಿ ಕಾಮಗಾರಿಗಳು ವೇಗ ಪಡೆಯುವ ನಿರೀಕ್ಷೆ ಇದೆ.
ಗದಗ-ವಾಡಿ ಮಾರ್ಗದಿಂದ ಜಿಲ್ಲೆಯ ಜನರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಹೊಸ ಪ್ರಯತ್ನ ಕೈಗೊಳ್ಳಲಾಗಿದೆ. ಗದಗ-ಕೃಷ್ಣಾ ಮಾರ್ಗದ (216 ಕಿ.ಮೀ) ಸಮೀಕ್ಷೆಗೆ 54 ಲಕ್ಷ ರೂ. ಮೀಸಲಿಡಲಾಗಿದೆ. ಈ ಮಾರ್ಗ ಗದಗ, ಕೋಟುಮಚಗಿ, ನರೇಗಲ್, ಗಜೇಂದ್ರಗಡ, ಹನುಮಸಾಗರ, ಇಳಕಲ್ ಮತ್ತು ಲಿಂಗಸೂರವರೆಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾಗಿದೆ. ಈ ಮಾರ್ಗಕ್ಕೆ ಎಂಜಿನಿಯರಿಂಗ್ ಮತ್ತು ಟ್ರಾಫಿಕ್ ಸಮೀಕ್ಷೆಗೆ ಹಸಿರು ನಿಶಾನೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಹೊಸ ರೈಲು ಹಳಿ ನಿರ್ಮಾಣಕ್ಕೆ ದಾರಿ ತೆರೆಯಲಿದೆ.
ಇನ್ನೊಂದು ಪ್ರಮುಖ ಯೋಜನೆಯಾದ ಗದಗ-ಯಲವಗಿ ರೈಲ್ವೆ ಮಾರ್ಗಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. 58 ಕಿ.ಮೀ ಉದ್ದದ ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ 73 ಲಕ್ಷ ರೂ. ಮೀಸಲಾಗಿದೆ. ಈ ಯೋಜನೆಗೆ ಈಗಾಗಲೇ ಭೂಸ್ವಾಧೀನಕ್ಕಾಗಿ ದೊಡ್ಡ ಮೊತ್ತ ಮೀಸಲಿಟ್ಟಿದ್ದು, ಅಂತಿಮ ಸಮೀಕ್ಷೆ ಪೂರ್ಣಗೊಂಡ ನಂತರ ಕಾಮಗಾರಿ ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದೆ.
ಅತ್ಯಂತ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಯೋಜನೆಗಳಲ್ಲಿ ಗದಗ-ಮುಂಡರಗಿ-ಹರಪನಹಳ್ಳಿ ರೈಲ್ವೆ ಮಾರ್ಗ ಪ್ರಮುಖವಾಗಿದೆ. ಈ ಮಾರ್ಗದ ಮರು ಸಮೀಕ್ಷೆಗೆ 9 ಲಕ್ಷ ರೂ. ಮೀಸಲಿಟ್ಟಿರುವುದು ವಿಶೇಷವಾಗಿದೆ. ಈ ಯೋಜನೆ ಹಿಂದೆ ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದರೂ, ಇದೀಗ ಮತ್ತೆ ಚೇತರಿಸಿಕೊಂಡಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
2014ರಲ್ಲಿ ಈ ಯೋಜನೆಗೆ ಮೊದಲ ಬಾರಿಗೆ ಅನುಮೋದನೆ ದೊರೆತಿತ್ತು. ಆಗ ಸುಮಾರು 814 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಆದರೆ ನಂತರ ಸಲ್ಲಿಕೆಯಾಗಿದ್ದ ಸರ್ವೆ ವರದಿಯಲ್ಲಿ ಆರ್ಥಿಕ ಲಾಭದ ಕೊರತೆಯನ್ನು ಉಲ್ಲೇಖಿಸಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಜನರಲ್ಲಿ ನಿರಾಶೆ ಮೂಡಿತ್ತು.
ಈ ನಿರ್ಧಾರಕ್ಕೆ ವಿರೋಧವಾಗಿ ಗದಗ-ಹರಪನಹಳ್ಳಿ ರೈಲ್ವೆ ಹೋರಾಟ ಸಮಿತಿ ಹಲವು ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿತು. ರಾಜ್ಯದಲ್ಲೇ ಅಲ್ಲದೆ ದೆಹಲಿಯಲ್ಲೂ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈಗ ಈ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.
ಈ ನಡುವೆ, ಗದಗ ಜಿಲ್ಲೆಯ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ಇನ್ನೂ ಹಲವು ಪ್ರಮುಖ ಘೋಷಣೆಗಳು ಮಾಡಲಾಗಿದೆ. ಹುಬ್ಬಳ್ಳಿ-ಗದಗ ನಡುವಿನ 27 ಕಿ.ಮೀ ಹಳಿಯ ನವೀಕರಣಕ್ಕೆ 139.31 ಕೋಟಿ ರೂ. ಮೀಸಲಾಗಿದೆ. ಗದಗ-ಹೊಸಪೇಟೆ ನಡುವಿನ 33.5 ಕಿ.ಮೀ ಹಳಿಗೆ 105.94 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಇದಲ್ಲದೆ, ಗದಗ-ಹೊಟಗಿ ಮಾರ್ಗದಲ್ಲಿ 40.9 ಕಿ.ಮೀ ಹಳಿಯ ನವೀಕರಣಕ್ಕೆ 59.02 ಕೋಟಿ ರೂ. ನೀಡಲಾಗಿದೆ. ಹಳಿಗಳ ಸಮಗ್ರ ಸುಧಾರಣೆಗೆ 594.50 ಕೋಟಿ ರೂ. ಹಾಗೂ ನಿರ್ವಹಣೆಗೆ 27.94 ಕೋಟಿ ರೂ. ಮೀಸಲಾಗಿದೆ. ಈ ಯೋಜನೆಗಳು ರೈಲು ಪ್ರಯಾಣವನ್ನು ಸುರಕ್ಷಿತ ಮತ್ತು ಸುಗಮವಾಗಿಸಲು ಸಹಾಯ ಮಾಡಲಿವೆ.
ಇನ್ನು ಗದಗ-ವಿಜಯಪುರ ಮಾರ್ಗದಲ್ಲಿ ತಿರುವುಗಳ ಸುಧಾರಣೆ, ಗದಗ-ಬಳ್ಳಾರಿ ಮಾರ್ಗದಲ್ಲಿನ ಹಳೆಯ ಸೇತುವೆಗಳ ನವೀಕರಣ ಹಾಗೂ ಪ್ರಮುಖ ರೈಲು ನಿಲ್ದಾಣಗಳಲ್ಲಿ ವಿಡಿಯೋ ಕಣ್ಗಾವಲು ವ್ಯವಸ್ಥೆ ಅಳವಡಿಸುವ ಯೋಜನೆಯೂ ಘೋಷಿಸಲಾಗಿದೆ. ನಿರ್ಭಯಾ ನಿಧಿಯಡಿ ಈ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಒಟ್ಟಿನಲ್ಲಿ, ಈ ಬಾರಿಯ ಬಜೆಟ್ ಗದಗ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸಿದೆ. ಈ ಯೋಜನೆಗಳು ಜಾರಿಗೆ ಬಂದರೆ ಜಿಲ್ಲೆಯ ಆರ್ಥಿಕತೆ, ಉದ್ಯೋಗಾವಕಾಶಗಳು ಮತ್ತು ಸಂಪರ್ಕ ವ್ಯವಸ್ಥೆ ಮಹತ್ತರವಾಗಿ ಸುಧಾರಣೆಯಾಗಲಿದೆ.
ಜನರ ದಶಕಗಳ ಕನಸು ಈಗ ನಿಜವಾಗುವ ಹಂತಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯ ರೈಲ್ವೆ ನಕ್ಷೆ ಸಂಪೂರ್ಣವಾಗಿ ಬದಲಾಗುವ ನಿರೀಕ್ಷೆ ಇದೆ